ರೂಪಾಂತರ
ರೂಪಾಂತರ ಎಂದರೆ ಪ್ರಾಣಿ ಬೆಳೆವಣಿಗೆಯ ಆರಂಭಿಕ ಹಂತಗಳಲ್ಲಿ ದೇಹದ ರೂಪ ಸಂಪೂರ್ಣವಾಗಿಯೂ ಸ್ಪಷ್ಟವಾಗಿಯೂ ಬದಲಾಗುವ ಪ್ರಕ್ರಿಯೆ (ಮೆಟಮಾರ್ಫೊಸಿಸ್).[೧] ಪರ್ಯಾಯ ಪದ: ರೂಪ ಪರಿವರ್ತನೆ. ಇದು ಅನೇಕ ಅಕಶೇರುಕಗಳ, ಬಹುತೇಕ ಉಭಯಜೀವಿಗಳ ಮತ್ತು ಕೆಲವು ಮೀನುಗಳ ಜೀವನಚಕ್ರಗಳಲ್ಲಿ ಘಟಿಸುವ ಸಾಮಾನ್ಯ ವಿದ್ಯಮಾನ.[೨] ರೂಪಾಂತರಾವಧಿ ಆಗಬೇಕಾದ ಬದಲಾವಣೆಯ ಸಂಕೀರ್ಣತೆಯನ್ನು ಅವಲಂಬಿಸಿದೆ. ಇದು ಅನೇಕ ಮಧ್ಯಂತರ ಹಂತಗಳಲ್ಲಿ ನಿಧಾನವಾಗಿಯೂ, ಅಥವಾ ಒಂದೇ ಹಂತದಲ್ಲಿ ವೇಗವಾಗಿಯೂ ಜರಗಬಹುದು. ಎರಡನೆಯ ಬಗೆಯ ರೂಪಾಂತರಣದಲ್ಲಿ, ವಿಶೇಷವಾಗಿ ಲಾರ್ವ ಮತ್ತು ವಯಸ್ಕ ಅವಸ್ಥೆಯ ನಡುವಣ ವ್ಯತ್ಯಾಸ ಅಧಿಕವಾಗಿದ್ದಾಗ, ಎಲ್ಲ ವಿಶಿಷ್ಟ ಅಂಗಗಳೂ ಸೇರಿದಂತೆ ಲಾರ್ವದೇಹದ ಅನೇಕ ಭಾಗಗಳು ವಿಘಟಿಸುತ್ತವೆ. ಅದೇ ಕಾಲದಲ್ಲಿ ವಯಸ್ಕ ಅಂಗಾಂಗಳು ರೂಪುಗೊಳ್ಳುತ್ತವೆ. ಸಾಮಾನ್ಯವಾಗಿ ಆ ತನಕ ನಿಷ್ಕ್ರಿಯವಾಗಿದ್ದ ಕೋಶಸಮೂಹದಿಂದ ಇವು ರೂಪುಗೊಳ್ಳುತ್ತವೆ. ಈ ವಿದ್ಯಮಾನವೇ ಊತಕ ಕ್ಷಯ ರೂಪಾಂತರ (ನೆಕ್ರೊಬಯಾಟಿಕ್ ಮೆಟಮಾರ್ಫೊಸಿಸ್).
ನಿಧಾನವಾಗಿ ಮತ್ತು ವೇಗವಾಗಿ ಜರಗುವ ರೂಪಾಂತರಗಳೆರಡಕ್ಕೂ ದೃಷ್ಟಾಂತಗಳು ಕೀಟಜಗತ್ತಿನಲ್ಲಿವೆ.
- ನಿಧಾನ ರೂಪಾಂತರ: ಜಿರಲೆ ಮತ್ತು ಮಿಡಿತೆಯಂಥ ಆದಿಮ ಕೀಟಗಳಲ್ಲಿ ರೂಪಾಂತರ ನಿಧಾನವಾಗಿ ಜರಗುತ್ತದೆ. ಇವುಗಳ ಲಾರ್ವಗಳಿಗೆ ಅಪ್ಸರೆ ಕೀಟ (ನಿಂಫ್) ಎಂಬ ಹೆಸರೂ ಉಂಟು. ದೇಹ ರಚನೆ ಮತ್ತು ಆಹಾರಾಭ್ಯಾಸದಲ್ಲಿ ಬಹುತೇಕ ವಯಸ್ಕ ಕೀಟಗಳನ್ನು ಹೋಲುವ ಇವಕ್ಕೆ ರೆಕ್ಕೆಗಳಿರುವುದಿಲ್ಲ ಹಾಗೂ ಲಿಂಗಾಂಗಳ ಬೆಳೆವಣಿಗೆ ಅಪೂರ್ಣವಾಗಿರುತ್ತದೆ. ನಿರ್ಮೋಚನೆ (ಮೋಲ್ಟಿಂಗ್) ಅಥವಾ ಪೊರೆಬಿಡುವಿಕೆ (ಶೆಡ್ಡಿಂಗ್) ಪ್ರಕ್ರಿಯೆಗಳ ಮುಖೇನ ಇವು ನಿಧಾನವಾಗಿ ವಯಸ್ಕ ಕೀಟಗಳಾಗುತ್ತವೆ.
- ವೇಗದ ರೂಪಾಂತರ: ಜೀರುಂಡೆ, ಚಿಟ್ಟೆ, ಕಣಜ ಮುಂತಾದ ಕೀಟಗಳಲ್ಲಿ ರೂಪಾಂತರ ವೇಗವಾಗಿ ಜರಗುತ್ತದೆ. ಇವುಗಳ ಲಾರ್ವಗಳೇ ಕಂಬಳಿಹುಳುಗಳು (ಕ್ಯಾಟರ್‌ಪಿಲರ್). ಈ ಲಾರ್ವಗಳಿಗೂ ವಯಸ್ಕ ಕೀಟಗಳಿಗೂ ಅಗಾಧ ವ್ಯತ್ಯಾಸಗಳಿವೆ. ಎಂದೇ, ರೂಪಾಂತರ ಪ್ರಕ್ರಿಯೆ ಕೋಶಾವಸ್ಥೆ (ಪ್ಯೂಪಾವಸ್ಥೆ) ಎಂಬ ಮಧ್ಯಂತರ ಹಂತದಲ್ಲಿ ಒಮ್ಮೆಗೇ ಜರಗುತ್ತದೆ.[೩] ಲಾರ್ವಗಳು ತಮ್ಮ ಸುತ್ತಲೂ ಕೋಶವೊಂದನ್ನು ತಾವೇ ನಿರ್ಮಿಸಿಕೊಂಡು ಆಹಾರ ಸೇವನೆ ಹಾಗೂ ಯಾವುದೇ ಚಲನೆ ಇಲ್ಲದೆ ಗಾಢ ನಿದ್ದೆಗೈಯುವ ಹಂತ ಇದು. ಇದರಲ್ಲಿ, ಲಾರ್ವಾಂಗಗಳು ನಾಶವಾಗಿ ವಯಸ್ಕಾಂಗಗಳು ಸೃಷ್ಟಿಯಾಗುತ್ತವೆ. ಲಾರ್ವದ ಚರ್ಮ ಮತ್ತು ಅನ್ನನಾಳದ ಬಹುಭಾಗ ನಾಶವಾಗುವುದೂ ಉಂಟು. ಸಂಪೂರ್ಣ ಪರಿವರ್ತನೆ ಆದ ಬಳಿಕ ಕೋಶವನ್ನು ಭೇದಿಸಿ ವಯಸ್ಕ ಕೀಟಗಳು ಹೊರಬರುತ್ತವೆ.
ಊತಕ ಕ್ಷಯ ರೂಪಾಂತರ
[ಬದಲಾಯಿಸಿ]ಚರ್ಮಕವಚವುಳ್ಳ ಮೃದ್ವಂಗಿಗಳ (ಟ್ಯೂನಿಕೇಟ್) ಲಾರ್ವಗಳಲ್ಲಿ ಜರಗುವ ಊತಕ ಕ್ಷಯ ರೂಪಾಂತರದಲ್ಲಿ ವಯಸ್ಕ ಗಂಟಲ ಕುಹರ (ಫ್ಯಾರಿಂಜಿಯಲ್ ಕ್ಯಾವಿಟಿ) ರೂಪುಗೊಳ್ಳುತ್ತಿರುವಾಗಲೇ ಆದಿಮ ಬೆನ್ನುಹುರಿ (ನೋಟೊಕಾರ್ಡ್) ಮತ್ತು ಊತಕಗಳೂ ಸೇರಿದಂತೆ ಬಾಲವೂ ಆದಿಮ ಮಿದುಳಿನ ಬಹುಭಾಗವೂ ನಾಶವಾಗುತ್ತವೆ. ಚೋಂದಕಪ್ಪೆ ಅಥವಾ ಗೊದಮೊಟ್ಟೆ (ಟ್ಯಾಡ್‍ಪೋಲ್) ಕಪ್ಪೆಯಾಗಿ ರೂಪಾಂತರಗೊಳ್ಳುವಾಗಲೂ ವಯಸ್ಕ ಅಂಗಗಳ ರೂಪಣೆ ಹಾಗೂ ಬಾಲ, ಈಜುರೆಕ್ಕೆ ಮುಂತಾದ ಆದಿಮ ಅಂಗಗಳ ನಾಶ ಏಕಕಾಲದಲ್ಲಿ ಆಗುತ್ತದೆ.
ಯುಕ್ತ ಕಾಲಗಳಲ್ಲಿ ಯುಕ್ತ ಗ್ರಂಥಿಗಳು ಸ್ರವಿಸುವ ವಿಭಿನ್ನ ಹಾರ್ಮೋನುಗಳು ರೂಪಾಂತರಾವಧಿಯ ಸುವ್ಯವಸ್ಥಿತ ಹಾಗೂ ಸುಸಂಘಟಿತ ಬದಲಾವಣೆಗಳಿಗೆ ಚಾಲನೆ ನೀಡುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "metamorphosis | biology | Britannica". www.britannica.com (in ಇಂಗ್ಲಿಷ್). Retrieved 2022-04-01.
- ↑ "What animals undergo incomplete metamorphosis? – Easierwithpractice.com". easierwithpractice.com. Retrieved 2022-04-01.
- ↑ Lowe, Tristan; Garwood, Russell P.; Simonsen, Thomas; Bradley, Robert S.; Withers, Philip J. (July 6, 2013). "Metamorphosis revealed: Time-lapse three-dimensional imaging inside a living chrysalis". Journal of the Royal Society Interface. 10 (84). 20130304. doi:10.1098/rsif.2013.0304. PMC 3673169. PMID 23676900.
ಗ್ರಂಥಸೂಚಿ
[ಬದಲಾಯಿಸಿ]- Davies, R.G. (1998). Outlines of Entomology. Chapman and Hall. Second Edition. Chapter 3.
- Williamson D.I. (2003). The Origins of Larvae. Kluwer.