ದಾಳಿ
ದಾಳಿಯು ಒಂದು ಸೇನಾ ದಂಡಯಾತ್ರೆ. ಇದರಲ್ಲಿ ಒಂದು ಭೂರಾಜ್ಯಶಾಸ್ತ್ರೀಯ ಘಟಕದ ಯೋಧರ ದೊಡ್ಡ ಗುಂಪು ಅಂತಹ ಮತ್ತೊಂದು ಘಟಕದಿಂದ ನಿಯಂತ್ರಿಸಲ್ಪಟ್ಟ ಪ್ರಾಂತವನ್ನು, ಸಾಮಾನ್ಯವಾಗಿ ಅದನ್ನು ಗೆಲ್ಲುವ, ಸ್ವತಂತ್ರಗೊಳಿಸುವ, ಅಥವಾ ಅದರ ಮೇಲೆ ಹಿಡಿತ ಅಥವಾ ಅಧಿಕಾರವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಆಕ್ರಮಣಶೀಲವಾಗಿ ಪ್ರವೇಶಿಸುತ್ತದೆ. ದಾಳಿಯಿಂದ ಒಂದು ದೇಶ ವಿಭಜನೆಯಾಗಬಹುದು, ಸ್ಥಾಪಿತ ಸರ್ಕಾರ ಬದಲಾಗಬಹುದು ಅಥವಾ ಆ ಸರ್ಕಾರದಿಂದ ರಿಯಾಯಿತಿಗಳನ್ನು ಪಡೆಯಬಹುದು, ಅಥವಾ ಇವೆಲ್ಲದರ ಸಂಯೋಜನೆಗಳನ್ನು ಪಡೆಯಬಹುದು. ದಾಳಿಯು ಯುದ್ಧಕ್ಕೆ ಕಾರಣವಾಗಬಹುದು, ಒಂದು ಯುದ್ಧವನ್ನು ಅಂತ್ಯಗೊಳಿಸುವ ಕಾರ್ಯತಂತ್ರದ ಭಾಗವಾಗಿರಬಹುದು, ಅಥವಾ ಅದು ಸ್ವತಃ ಒಂದು ಸಂಪೂರ್ಣ ಯುದ್ಧವಾಗಿರಬಹುದು. ದಾಳಿಗಳಿಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಕಾರ್ಯಾಚರಣೆಗಳ ಕಾರಣ, ಅವು ಯೋಜನೆ ಮತ್ತು ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಯುದ್ಧೋದ್ದೇಶಿಯಾಗಿರುತ್ತವೆ.
ಪೂರ್ವೇತಿಹಾಸದ ಕಾಲದಿಂದ ದಾಳಿಗಳು ಆಗಾಗ್ಗಿನ ಘಟನೆಗಳಾಗಿವೆ ಎಂದು ಪುರಾತತ್ವ ಸಾಕ್ಷಾಧಾರಗಳು ಸೂಚಿಸುತ್ತವೆ. ಪ್ರಾಚೀನ ಕಾಲದಲ್ಲಿ, ರೇಡಿಯೋ ಸಂವಹನ ಮತ್ತು ಕ್ಷಿಪ್ರ ಸಾರಿಗೆ ಬರುವ ಮೊದಲು, ಸಾಕಾಗುವಷ್ಟು ಪಡೆಗಳನ್ನು ಖಚಿತಪಡಿಸಿಕೊಳ್ಳುವ ಏಕೈಕ ದಾರಿಯೆಂದರೆ ಸೇನೆಗಳನ್ನು ಒಂದು ಬೃಹತ್ ತಂಡವಾಗಿ ಚಲಿಸುವುದು ಆಗಿತ್ತು. ಇದು, ಅದರ ಸ್ವಭಾವದಿಂದ, ದಾಳಿಯ ಯುದ್ಧತಂತ್ರಕ್ಕೆ ಕಾರಣವಾಯಿತು. ದಾಳಿಯ ಆಗಮನದಿಂದ ಸರ್ಕಾರದಲ್ಲಿ ಸಾಂಸ್ಕೃತಿಕ ವಿನಿಮಯಗಳು, ಧರ್ಮ, ತತ್ವಶಾಸ್ತ್ರ ಮತ್ತು ತಂತ್ರಜ್ಞಾನಗಳು ಬಂದವು. ಇವು ಪ್ರಾಚೀನ ವಿಶ್ವದ ಬಹುಪಾಲಿನ ಬೆಳವಣಿಗೆಯನ್ನು ರೂಪಿಸಿದವು.[೧]
ಸಂಭಾವ್ಯ ವೈರಿ ನೆರೆರಾಜ್ಯಗಳನ್ನು ಹೊಂದಿರುವ ರಾಜ್ಯಗಳು ಒಂದು ದಾಳಿಯನ್ನು ಅಡ್ಡಪಡಿಸಲು ಅಥವಾ ತಡೆಯಲು ಸಾಮಾನ್ಯವಾಗಿ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುತ್ತವೆ. ನದಿಗಳು, ಜವುಗು ಪ್ರದೇಶಗಳು, ಅಥವಾ ಕಡಿದಾದ ಭೂಪ್ರದೇಶದಂತಹ ಭೌಗೋಳಿಕ ಅಡತಡೆಗಳನ್ನು ಬಳಸಿಕೊಳ್ಳುವುದರ ಜೊತೆಗೆ, ಐತಿಹಾಸಿಕವಾಗಿ ಈ ಕ್ರಮಗಳಲ್ಲಿ ರಕ್ಷಣಾತ್ಮಕ ಗೋಡೆಗಳು ಸೇರಿವೆ. ಅಂತಹ ರಕ್ಷಣೆಯು ದೇಶವನ್ನು ಪ್ರವೇಶಿಸದಂತೆ ದಾಳಿಮಾಡುವ ಪಡೆಗಳನ್ನು ಸಕ್ರಿಯವಾಗಿ ತಡೆಯಲು ಉದ್ದೇಶಿತವಾಗಿರಬಹುದು, ಸಾಮಾನ್ಯವಾಗಿ ವಿಸ್ತೃತ ಮತ್ತು ಚೆನ್ನಾಗಿ ರಕ್ಷಿಸಲ್ಪಟ್ಟ ತಡೆಗೋಡೆಯ ಮೂಲಕ; ಚೀನಾದ ಮಹಾಗೋಡೆ ಒಂದು ಪ್ರಸಿದ್ಧ ಉದಾಹರಣೆಯಾಗಿದೆ. ಅಂತಹ ತಡೆಗಳಲ್ಲಿ, ಕಂದಕ ರೇಖೆಗಳೂ ಸೇರಿವೆ, ಮತ್ತು ಆಧುನಿಕ ಕಾಲದಲ್ಲಿ, ಸಿಡಿಗುಂಡು ಪ್ರದೇಶಗಳು, ಕ್ಯಾಮರಾಗಳು, ಮತ್ತು ಚಲನ-ಸಂವೇದಿ ಸಂವೇದಕಗಳು ಸೇರಿವೆ. ಆದರೆ, ಈ ತಡೆಗಳಿಗೆ ರಕ್ಷಣೆ ಒದಗಿಸಲು, ಜೊತೆಗೆ ಉಪಕರಣ ಮತ್ತು ಸ್ಥಾನಗಳನ್ನು ಕಾಪಾಡಿಕೊಳ್ಳಲು ದೊಡ್ಡ ಸೇನಾ ಪಡೆಯು ಅಗತ್ಯವಾಗಬಹುದು. ಇದು ದೇಶದ ಮೇಲೆ ದೊಡ್ಡ ಆರ್ಥಿಕ ಹೊರೆಯನ್ನು ಹೊರಿಸಬಹುದು. ಇವೇ ತಂತ್ರಗಳಲ್ಲಿ ಕೆಲವನ್ನು ರಕ್ಷಕರ ವಿರುದ್ಧ ತಿರುಗಿಸಬಹುದು, ಪಲಾಯನವಾಗದಂತೆ ಅಥವಾ ಮರುಪೂರೈಕೆ ಆಗದಂತೆ ಇರಿಸಲು ಬಳಸಬಹುದು. ಆಪರೇಶನ್ ಸ್ಟಾರ್ವೇಶನ್‍ನ ಅವಧಿಯಲ್ಲಿ, ಮಿತ್ರದೇಶಗಳ ಪಡೆಗಳು ಜಪಾನ್‍ನ ಸ್ವಂತ ಗಡಿಗಳಲ್ಲಿನ ವ್ಯವಸ್ಥಾಪನಾ ಕಾರ್ಯಾಚರಣೆಗಳನ್ನು ತೀವ್ರವಾಗಿ ಅಡ್ಡಿಪಡಿಸಲು ಮೇಲಿನಿಂದ ಬೀಳಿಸಿದ ಸಿಡಿಗುಂಡುಗಳನ್ನು ಬಳಸಿದವು.
ಉಲ್ಲೇಖಗಳು
[ಬದಲಾಯಿಸಿ]- ↑ Bagnall, Nigel (1990). The Punic Wars: Rome, Carthage, and the Struggle for the Mediterranean. Thomas Dunne Books. ISBN 0-312-34214-4.