ಜೆಸ್ಸೋರ್
ಜೆಸ್ಸೋರ್- ಬಾಂಗ್ಲಾ ದೇಶದ ಜಿಲ್ಲೆ; ಅದರ ಆಡಳಿತ ಕೇಂದ್ರ.
ಭೌಗೋಲಿಕ ಮಾಹಿತಿ
[ಬದಲಾಯಿಸಿ]ಈ ಜಿಲ್ಲೆ ಗಂಗಾನದಿಯ ಮುಖಜಭೂಮಿಯ ಮಧ್ಯಭಾಗದಲ್ಲಿದೆ. ಉತ್ತರದಲ್ಲಿ ನದಿಯಾ, ದಕ್ಷಿಣದಲ್ಲಿ ಖುಲ್ನಾ, ಪಶ್ಚಿಮದಲ್ಲಿ ಭಾರತ (ಪಶ್ಚಿಮ ಬಂಗಾಳ) ಪೂರ್ವದಲ್ಲಿ ಮಧುಮತಿ ಮತ್ತು ಬಾರಾಸಿಯಾ ನದಿಗಳು ಇದರ ಮೇರೆಗಳು. ವಿಸ್ತೀರ್ಣ 2,547 ಚ.ಮೈ. ಜನಸಂಖ್ಯೆ 21,90,151 (1961). ಇದು ಮೆಕ್ಕಲು ಬಯಲುನಾಡು. ದಕ್ಷಿಣ ಭಾಗ ಚೌಗು, ನದಿ ಮತ್ತು ಜಲಮಾರ್ಗಗಳು ಹಾಸುಹೊಕ್ಕಾಗಿ ಹರಿಯುತ್ತವೆ. ಮಧುಮತಿ ವಿನಾ ಉಳಿದ ನದಿಗಳಲ್ಲಿ ಹೂಳು ತುಂಬಿ ನೀರು ನಿಲ್ಲುವ ಕಾರಣ, ಮಳೆಗಾಲದ ಹೊರತು ಉಳಿದ ಕಾಲಗಳಲ್ಲಿ ಅವು ಸರೋವರಗಳಂತಿರುತ್ತವೆ. ಪೂರ್ವಭಾಗದಲ್ಲಿ ಹರಿಯುವ ಗಾರಿ ಮತ್ತು ಮಧುಮತಿ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಕುಮಾರ್, ನಭಗಂಗಾ, ಚಿತ್ರಾ, ಕಬಡಕ್, ಬೈರಬ್ ಮತ್ತು ಇಚ್ಚಾಮತಿ-ಇವು ಇಲ್ಲಿಯ ಮುಖ್ಯ ನದಿಗಳು. ನದಿಗಳ ದಂಡೆಗುಂಟ ಉದ್ದಕ್ಕೂ ಮರಳುಮಿಶ್ರಿತ ಮೆಕ್ಕಲು ರಾಶಿ, ಕುರುಚಲು ವನ ಇವೆ.
ಚೌಗು ಭಾಗಗಳಲ್ಲಿ ವಿವಿಧ ಜನಸಸ್ಯಗಳುಂಟು. ಜಿಲ್ಲೆಯಲ್ಲಿ ಅರಣ್ಯಗಳಿಲ್ಲ. ಬಿದಿರು, ಬಾಬೂಲ್, ಅಲ, ಹುಣಿಸೆ ಮರಗಳು ಅಧಿಕ. ಚಿರತೆ, ಕಾಡುಹಂದಿ, ವಿವಿಧ ಜಲಚರಗಳು, ಪಕ್ಷಿಗಳು ಇವೆ.
ಇತಿಹಾಸ
[ಬದಲಾಯಿಸಿ]ಪ್ರಾಚೀನ ಕಾದಲ್ಲಿ ಇದು ವಂಗ ರಾಜ್ಯದ ಭಾಗವಾಗಿತ್ತು. ಸು. 15ನೆಯ ಶತಮಾನದಲ್ಲಿ ಈ ಪ್ರದೇಶವನ್ನು ಗೌಡದೇಶದ (ಬಂಗಾಳದ) ಅರಸನಿಂದ ಜಹಗೀರಾಗಿ ಪಡೆದ ಖಾನ್‍ಜ ಅಲಿ, ಸುಂದರಬನ ಪ್ರದೇಶಕ್ಕೂ ಒಡೆಯನಾಗಿದ್ದು 1459ರಲ್ಲಿ ಮೃತನಾದ. ಅವನ ಕಾಲದಲ್ಲಿ ಕಟ್ಟಿಸಿದ ಮಸೀದಿ ಮತ್ತು ಸಮಾಧಿ ಭವನಗಳು ಈಗಲೂ ಖುಲ್ನಾ ಪ್ರದೇಶದಲ್ಲಿವೆ. 16ನೆಯ ಶತಮಾನದಲ್ಲಿ ಬಂಗಾಳದ ಕೊನೆಯ ಅರಸ ದಾವೂದ್‍ಖಾನನ ಮುಖ್ಯಮಂತ್ರಿ ರಾಜಾವಿಕ್ರಮಾದಿತ್ಯ ಆ ಅರಸನಿಂದ ಸುಂದರಬನಗಳ ಒಡೆತನವನ್ನು ಸನ್ನದಿನ ಮೂಲಕ ಪಡೆದು ಅಲ್ಲಿ ಯಶೋಹರ ಎಂಬ ನಗರವನ್ನು ಕಟ್ಟಿಸಿ ನೆಲೆಸಿದ. ಗೌಡ ದೇಶದ ಯಶಸ್ಸನ್ನು ಈ ನಗರ ಹರಣಮಾಡಿತೆಂದು ಅದಕ್ಕೆ ವಿಕ್ರಮಾದಿತ್ಯ ಯಶೋಹರ ಎಂಬ ಹೆಸರಿಟ್ಟನೆಂದು ಪ್ರತೀತಿ. ಜೆಸ್ಸೋರ್ ಯಶೋಹರದ ಅಪಭ್ರಂಶ. ಯಶೋಹರ ನಗರದ ನಿವೇಶನ ಈಗಿನ ಈಶ್ವರಿಪುರದಲ್ಲಿದೆ. ರಾಜಾ ವಿಕ್ರಮಾದಿತ್ಯನ ತರುವಾಯ ಇಲ್ಲಿ ಪ್ರಸಿದ್ದನಾಗಿದ್ದವನು ಅವನ ಮಗ ಪ್ರತಾಪಾದಿತ್ಯ. 1589-1606ರ ಅವಧಿಯಲ್ಲಿ ಬಂಗಾಳದ ಫೌಜುದಾರನಾಗಿ ಬಂದ ಅಕ್ಬರನ ದಂಡನಾಯಕ ರಾಜಾ ಮಾನಸಿಂಹ ಪ್ರತಾಪಾದಿತ್ಯನ್ನು ಸೋಲಿಸಿ ಸೆರೆಹಿಡಿದ. ಪ್ರತಾಪಾದಿತ್ಯನ ತರುವಾಯ ಜೆಸ್ಸೋರ್ ಮೂರು ಜಮೀನುದಾರಿಗಳಾಗಿ ಒಡೆಯಿತು. ಈಸ್ಟ್ ಇಂಡಿಯ ಕಂಪನಿ ಸ್ಥಾಪಿಸಿದ ಜೆಸ್ಸೋರ್ ಜಿಲ್ಲೆಗೆ ಕಸ್ಬಾ ಗ್ರಾಮವನ್ನು ಮುಖ್ಯಪಟ್ಟಣ ಮಾಡಿ ಆ ಗ್ರಾಮವನ್ನೂ ಜೆಸ್ಸೋರ್ ಎಂದು ಕರೆಯಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಜೆಸ್ಸೂರ್ 24 ಪರಗಣ ಜಿಲ್ಲೆಗೆ ಸೇರಿತ್ತು. 1947ರಲ್ಲಿ ಇದು ಪೂರ್ವ ಪಾಕಿಸ್ತಾನಕ್ಕೆ ಸೇರಿತು. 1971ರಲ್ಲಿ ಬಾಂಗ್ಲಾದೇಶ ಸ್ಥಾಪನೆಗೊಂಡ ಮೇಲೆ ಅದರ ಒಂದು ಮುಖ್ಯಜಿಲ್ಲೆಯಾಗಿದೆ.
ಬೆಳೆಗಳು
[ಬದಲಾಯಿಸಿ]ಹೊಗೆಸೊಪ್ಪು, ಕಬ್ಬು, ನೀಲಿ, ಬತ್ತ- ಇವು ಜಿಲ್ಲೆಯ ಮುಖ್ಯ ಬೆಳೆಗಳು. ಇಲ್ಲಿ ಈಚಲ ರಸದಿಂದ ತಾಳಿದೆಲ್ಲ ತಯಾರಿಸುತ್ತಾರೆ.
ಜೆಸ್ಸೋರ್ ನಗರ
[ಬದಲಾಯಿಸಿ]ಜೆಸ್ಸೋರ್ ನಗರವು ಬೈರಬ್ ನದಿಯ ದಂಡಯ ಮೇಲಿದೆ. ಇಲ್ಲಿಂದ ಕಲ್ಕತ್ತ 118 ಕಿ.ಮೀ ಖುಲ್ನಾ 56ಕಿ.ಮೀ ಜನಸಂಖ್ಯೆ 46,366 (1961). ನಗರದ ಪ್ರಾಚೀನ ಕಟ್ಟಡಗಳಲ್ಲಿ ಚಾಂಚ್ರ ರಾಜನ ಅರಮನೆಯೂ ಪೀರೊ ಬಹರಾಂ ಷಾ ಹಾಗೂ ಗರೀಬ್ ಷಾ ಸಮಾಧಿಭವನಗಳೂ ಮುಖ್ಯವಾದವು. ಪುರಭವನ, ಜಿಲ್ಲಾಧಿಕಾರಿ ಕಚೇರಿ, ಕ್ರೀಡಾರಂಗ, ಇವು ಆಧುನಿಕ ಕಟ್ಟಡಗಳು. ಮೈಕೇಲ್ ಮಧುಸೂದನ ಕಾಲೇಜು ನಗರದ ಹಳೆಯ ಕಾಲೇಜುಗಳಲ್ಲಿ ಒಂದು. ಜೆಸ್ಸೋರಿನಿಂದ ಉತ್ತರಕ್ಕೆ ದರ್ಸಾನ್‍ವರೆಗೆ ಹಾಗೂ ದಕ್ಷಿಣದಲ್ಲಿ ಖುಲ್ನಾವರೆಗೆ ರೈಲುಮಾರ್ಗಗಳಿವೆ. ಢಾಕಾ ಮೊದಲಾದ ಸ್ಥಳಗಳಿಗೆ ಇಲ್ಲಿಂದ ವಿಮಾನ ಸಂಚಾರವುಂಟು. ಪ್ರಸಿದ್ಧ ನಾಟ್ಯಕಾರ ಉದಯಶಂಕರ್ ಜನಿಸಿದ್ದು ಈ ನಗರದಲ್ಲೆ.